ಮೆಕೆನ್ಜಿ, ಮಾರೆಲ್  
1837-92. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡಿನಲ್ಲಿದ್ದ ಗಂಟಲುರೋಗತಜ್ಞ. ಈತ ಜರ್ಮನ್ ಚಕ್ರವರ್ತಿ ಮೂರನೆಯ ಫ್ರೆಡರಿಕ್‍ನನ್ನು ಚಿಕಿತ್ಸೆಮಾಡುವುದಕ್ಕೆ ಹೋಗಿ ಅವನ ಮರಣಕ್ಕೆ ಕಾರಣನಾದನೆಂದು ಕುಖ್ಯಾತಿ ಪಡೆದ. ಎಸ್ಸೆಕ್ಸಿನ ಲೇಯ್ಟನ್‍ಸ್ಟೋನ್ ಎಂಬಲ್ಲಿ 1837 ಜುಲೈ 7ರಂದು ಜನಿಸಿದ. ಲಂಡನ್ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯಾಸಂಗ ಪ್ರಾರಂಭಿಸಿ ಪ್ಯಾರಿಸ್, ವಿಯೆನ್ನ ಮತ್ತು ಬುಡಾಪೆಸ್ಟ್ ನಗರಗಳಲ್ಲಿ ವ್ಯಾಸಂಗ ಮುಂದುವರಿಸಿ 1862ರಲ್ಲಿ ಎಂ.ಡಿ. ಪದವಿ ಗಳಿಸಿದ. ಆ ತರುಣದಲ್ಲೆ ಉಪಜ್ಞಿಸಲ್ಪಟ್ಟಿದ್ದ ಲ್ಯಾರಿಂಗೊಸ್ಕೋಪ್ ಎಂಬ ಗಂಟಲುಪರೀಕ್ಷಾ ಸಾಧನ ಬಳಕೆಯಲ್ಲಿ ವಿಶಿಷ್ಟ ಪರಿಣತಿ ಪಡೆದು ಗಂಟಲುರೋಗಗಳ ತಜ್ಞನಾಗಿ ಪ್ರಸಿದ್ಧಿ ಪಡೆದ. ಲಂಡನ್ನಿನಲ್ಲಿ ಗಂಟಲುರೋಗ ಚಿಕಿತ್ಸಾಸಂಸ್ಥೆಯನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಕಾರಣನಾದ.

	ಜರ್ಮನಿಯ ರಾಜಕುಮಾರ ಫ್ರೆಡರಿಕ್ ಗಂಟಲು ರೋಗದಿಂದ ನರಳುತ್ತಿದ್ದು (1887) ಆ ರೋಗದ ಬಗ್ಗೆ ಜರ್ಮನ್ ವೈದ್ಯರಲ್ಲಿ ಏಕಾಭಿಪ್ರಾಯ ಮೂಡಿರಲಿಲ್ಲ. ಮಾರ್ಚ್ ತಿಂಗಳಿಂದಲೇ ವಿವಿಧ ಚಿಕಿತ್ಸೆಗಳನ್ನು ಮಾಡುತ್ತಿದ್ದರೂ ಗುಣವಾಗದಿದ್ದರಿಂದ ಮೇ ತಿಂಗಳ ಆದಿಭಾಗದಲ್ಲಿ ಅವರು ಗಂಟಲಿನ ರೋಗ ಏಡಿಗಂತಿಯೆ ಇರಬೇಕು ಎಂಬ ನಿರ್ಧಾರಕ್ಕೆ ಬಂದು ಮೇ 21ರಂದು ಅದನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಬೇಕೆಂದು ತೀರ್ಮಾನಿಸಿದರು. ಆದರೆ ತತ್ಪೂರ್ವ ಮೆಕೆನ್ಜಿಯ ಅಭಿಪ್ರಾಯ ಪಡೆಯಬೇಕೆಂದು ಅರಮನೆಯವರಿಗೆ ಅನ್ನಿಸಿದ್ದರಿಂದ ಅವನನ್ನು ಬರಮಾಡಿಕೊಂಡು ರಾಜಕುಮಾರನ ಗಂಟಲಿನ ಪರೀಕ್ಷೆ ಮಾಡಿಸಿದರು. ಈ ರಾಜಕುಮಾರನ ಗಂಟಲು ವ್ರಣದ ಒಂದು ಚೂರನ್ನು ಪರೀಕ್ಷಿಸಿ ವ್ರಣ ಏಡಿಗಂತಿ ರೀತಿಯದಲ್ಲವೆಂದೂ ಅದಕ್ಕೆ ಶಸ್ತ್ರಕ್ರಿಯೆ ಅಗತ್ಯವಿಲ್ಲವೆಂದೂ ಬೇರೆ ಔಷಧಿಸೇವನೆಯಿಂದಲೇ ಗುಣವಾಗುವುದೆಂದೂ ಹೇಳಿದ. ಆದ್ದರಿಂದ ಮುಂಚೆಯೇ ಏರ್ಪಡಿಸಿದ್ದ ಗಂಟಲಶಸ್ತ್ರಕ್ರಿಯೆ ರದ್ದಾಯಿತು. ಔಷಧಿಪ್ರಯೋಗ ಪ್ರಾರಂಭವಾಯಿತು. ಏಡಿಗಂತಿ ಅಲ್ಲವೆಂದು ಹೇಳಿ ಶಸ್ತ್ರಕ್ರಿಯೆಯನ್ನು ತಪ್ಪಿಸಿದ ಮೆಕೆನ್ಜಿಯನ್ನು ಜರ್ಮನ್ ಚಕ್ರವರ್ತಿ ಸನ್ಮಾನಿಸಿದ. ರಾಜಕುಮಾರ ವಿಕ್ಟೋರಿಯ ರಾಣಿಯ ಅಳಿಯನಾಗಿದ್ದುದರಿಂದಲೋ ಏನೊ ಮೆಕೆನ್ಜಿಯನ್ನು ಇಂಗ್ಲೆಂಡಿನಲ್ಲೂ ಸನ್ಮಾನಿಸಲಾಯಿತು ಮತ್ತು 1887ರಲ್ಲಿ ಅವನಿಗೆ ಸರ್ ಬಿರುದನ್ನೂ ನೀಡಲಾಯಿತು. ಆದರೆ ಅದೇ ವರ್ಷ ನವೆಂಬರ್ ಹೊತ್ತಿಗೆ ರಾಜಕುಮಾರನ ಗಂಟಲುರೋಗ ನಿಜವಾಗಿಯೂ ಏಡಿಗಂತಿಯೇ ಎಂಬುದು ಸ್ಪಷ್ಟವಾಯಿತು. ಜರ್ಮನ್ ವೈದ್ಯರು ಪ್ರಯೋಗಿಸುತ್ತಿದ್ದ ಚಿಕಿತ್ಸಕಗಳ ಕೆರಳಿಕೆ ಸ್ವಭಾವದಿಂದ ಮೊದಲು ಸೌಮ್ಯವಾಗಿಯೇ ಇದ್ದ ಗಂಟಲಿನ ವ್ರಣ ಆಮೇಲೆ ಏಡಿಗಂತಿಯಾಗಿ ಪರಿವರ್ತಿತವಾಗಿರಬೇಕೆಂದು ಹೇಳಿ ಮೆಕೆನ್ಜಿ ತಾತ್ಕಾಲಿಕವಾಗಿ ನುಣುಚಿಕೊಂಡ. ಗಂಟಲು ನೋವಿನಿಂದ ನರಳುತ್ತಲೇ ಇದ್ದ ರಾಜಕುಮಾರ ಫ್ರೆಡರಿಕ್ ತಂದೆಯ ನಿಧನಾನಂತರ 1888 ಮಾರ್ಚ್ 10ರಂದು ಚಕ್ರವರ್ತಿಯಾಗಿ ಪಟ್ಟಾಭಿಷಿಕ್ತನಾದ. ಆದರೆ ಮೂರು ತಿಂಗಳಲ್ಲೆ (ಜೂನ್ 15ರಂದು) ಮೃತನಾದ. ಹೀಗೆ ಮಾರಕವಾಗಿಯೇ ಪರಿಣಮಿಸಿದ ರೋಗದ ವಿಚಾರವಾಗಿ ಜರ್ಮನ್ ವೈದ್ಯರಿಗೂ ಮೆಕೆನ್ಜಿಗೂ ನಡುವೆ ಭೀಕರ ವಾದವಿವಾದ ಪ್ರಾರಂಭವಾಯಿತು. ಜರ್ಮನ್ ವೈದ್ಯರು ಚಕ್ರವರ್ತಿಯ ರೋಗ ಲಕ್ಷಣಗಳನ್ನು ಮೊದಲಿನಿಂದ ಕೊನೆಯತನಕವೂ ವಿವರಿಸಿ ಮೆಕೆನ್ಜಿಯ ತಪ್ಪು ಅಭಿಪ್ರಾಯವೇ ಆತನ ಮರಣಕ್ಕೆ ಕಾರಣವಾಯಿತು ಎಂದು ಪ್ರಚಾರಮಾಡಿದರು. ಅದಕ್ಕೆ ಕಟುಸವಾಲಾಗಿ ಮೆಕೆನ್ಜಿ ಪತ್ರ ಬರೆದ. ಆದರೆ ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಸಂಸ್ಥೆ ಅದನ್ನು ತಡೆಹಿಡಿಯಿತು. ಅಂತೂ 1892 ಫೆಬ್ರುವರಿ 3ರಂದು ಲಂಡನ್ನಿನಲ್ಲಿ ಮೆಕೆನ್ಜಿ ಮೃತನಾಗುವ ತನಕ ವೈಯಕ್ತಿಕವಾಗಿ ಈ ಕಹಿ ಪ್ರಸಂಗ ಮರುಕಳಿಸುತ್ತಲೇ ಇತ್ತು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ